ನಮ್ಮ ಸಮಾಜ ನಾವೇ ಬೆಳೆಸಬೇಕು: ಲಿಂಗಾಯತರಿಗೆ ಬಿದರಿ ಕರೆ

ಶಿವಮೊಗ್ಗ : ರಾಜ್ಯದ ವೀರಶೈವ ಲಿಂಗಾಯತರು ಒಮ್ಮನಸ್ಸಿನಿಂದ ಒಳಪಂಗಡಗಳ ಕಿತ್ತು ಹಾಕಿ, ನಾವೆಲ್ಲ ಒಂದು ಎಂಬ ಒಗ್ಗಟ್ಟನ್ನು ತೋರಿಸಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಧ್ಯಕ್ಷ ಶಂಕರ ಬಿದರಿ ಕರೆ ನೀಡಿದರು.
ಅವರು ಇಂದು ಸರ್ಕಾರಿ ನೌಕರರ ಸಭಾ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ವಿವಿಧ ಸಂಘ ಸಂಸ್ಥೆ ಹಾಗೂ ಸೊಸೈಟಿಗಳಲ್ಲಿ ಆಯ್ಕೆಯಾದ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ನಾವು ೩ ಕೋಟಿ ಜನರಿದ್ದರೂ ಒಗ್ಗಟ್ಟಿಲ್ಲದೆ ಬಲಹೀನರಾಗಿದ್ದೇವೆ. ನಮ್ಮ ಶಕ್ತಿಯನ್ನು ತೋರಿಸುವ ಕೆಲಸವಾಗಬೇಕು ಎಂದರು.


ಪ್ರಸ್ತುತ ಎಲ್ಲರೂ ಒಳಪಂಗಡ ಗಳಿಗೆ ಒತ್ತು ನೀಡಿರುವುದರಿಂದ ಲಿಂಗಾಯತರು ಬಣಜಿಗ, ಪಂಚಮಸಾಲಿ, ಸಾದರು, ಹೂಗಾರ, ಕುಂಬಾರರು ಹೀಗೆ ಒಳಪಂಗಡಗಳಲ್ಲಿ ಹಂಚಿ ಹೋಗಿ ಚಿಕ್ಕ ಚಿಕ್ಕ ಮನೆಗಳಂತೆ ಆಗಿದ್ದೇವೆ. ಆದರೆ ನಮ್ಮದು ವೀರಶೈವ ಲಿಂಗಾಯತ ಸಮಾಜವೆಂಬ ದೊಡ್ಡ ಮನೆ. ಇದು ಜಗತ್ತಿನ ಮುಂದೆ ಗೋಚರಿಸಬೇಕು ಎಂದರೆ ಒಲ್ಲರೂ ವೀರಶೈವ- ಲಿಂಗಾಯತ ಎಂಬ ಒಂದೇ ವೇದಿಕೆಯಡಿ ಇರಬೇಕು ಎಂದು ಕರೆ ನೀಡಿದರು.
ನಾವು ಒಗ್ಗಟ್ಟಾಗಿ ನಿಂತರೆ ಬಲಿಷ್ಠರಾಗುತ್ತೇವೆ. ಆಗ ಯಾವುದೇ ಸರ್ಕಾರ ನಮ್ಮ ಪರ ವಾಗಿ ನಿಲ್ಲುತ್ತದೆ, ನಮ್ಮ ಬೇಡಿಕೆಗಳಿಗೆ ತಲೆ ಬಾಗುತ್ತದೆ. ಬಲಹೀನ ಸಂಘಟನೆಗೆ ಯಾರೂ ಗೌರವ ಕೊಡುವುದಿಲ್ಲ. ಆದ್ದರಿಂದ ಮಹಾ ಸಾಭಾದಡಿ ಎಲ್ಲರೂ ಒಂದಾಗಬೇಕು ಎಂದು ಮನವಿ ಮಾಡಿದರು.


ನಮ್ಮ ಸಮಾಜವನ್ನು ನಾವೇ ಬೆಳೆಸಬೇಕು, ಬೇರೆಯವರು ಬರುವುದಿಲ್ಲ. ಸಮಾಜದ ಇಂದಿನ ಹಿರಿಯರು ಮುಂದಿನ ಪೀಳಿಗೆಗೆ ಒಳ್ಳೆಯದನ್ನು ಬಿಟ್ಟುಹೋಗಬೇಕು ಎಂದು ಸಲಹೆ ನೀಡಿದರು.
ಮಹಾಸಭಾದಲ್ಲಿ ಹೊಸಬರಿಗೆ ಹೆಚ್ಚು ಅವಕಾಶ ಸಿಗಲೆಂದು ಅಧ್ಯಕ್ಷ ಸೇರಿದಂತೆ ಪ್ರಮುಖ ಸ್ಥಾನಗಳನ್ನು ೨ ಬಾರಿಗಿಂತ ಹೆಚ್ಚು ಬಾರಿ ನೀಡದಿರಲು ಬೈಲಾದಲ್ಲಿ ತಿದ್ದುಪಡಿ ತರಲು ಉದ್ದೇಶಿಸಿದೆ ಎಂದ ಅವರು, ರಾಜ್ಯದ ಎಲ್ಲಾ ತಾಲುಕು ಸಂಘಗಳು ಆರ್ಥಿಕವಾಗಿ ಸಬಲ ರಾಗಿ ಸಮಾಜದ ಏಳಿಗೆಗೆ ಕೆಲಸ ಮಾಡುವಂತಾಗಬೇಕು. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ ೧೦ ಕೋಟಿ ರೂ.ಗಳ ನಿಧಿ ಸ್ಥಾಪಿಸಬೇಕು. ಸಮಾಜದ ಪ್ರತಿಯೊಬ್ಬರೂ ತಮ್ಮ ದುಡಿಮೆಯ ಶೇ.೨ರಷ್ಟನ್ನು ಸಮಾಜಕ್ಕಾಗಿ ದಾನ ನೀಡಬೇಕೆಂದು ಕೋರಿದರು.
ನೂರಾರು ಶಿವಶರಣರ ಜಯಂತಿಯನ್ನು ಪ್ರತಿನಿತ್ಯ ಆಚರಿಸುವುದರ ಬದಲಿಗೆ ಬಸವ ಜಯಂತಿಯಂದು ಎಲ್ಲಾ ಶಿವಶರಣರ ಜಯಂತಿಯನ್ನು ಒಟ್ಟಿಗೆ ಆಚರಿಸುವ ಹೊಸ ಪದ್ಧತಿ ಪ್ರಾರಂಭಿಸೋಣ, ಈ ಕಾರ್ಯಕ್ರಮದಲ್ಲಿ ಸಾವಿರಾರು ಜಮಾಜ ಬಾಂಧವರು ಪಾಲ್ಗೊಳ್ಳು ವಂತಾಗಬೇಕು ಎಂದರು.
ಮಹಾಸಭಾ ರಾಜ್ಯ ಕಾರ್ಯದರ್ಶಿ ಶಶಿಕಲಾ ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಇರುವ ಮಹಾಸಭಾಕ್ಕೆ ಸದಸ್ಯತ್ವ ಅತ್ಯಂತ ಕಡಿಮೆ ಇದ್ದು, ಇದನ್ನು ಹೆಚ್ಚಿಸಬೇಕು. ಸಮಾಜ ಕ್ಕಾಗಿ ದುಡಿಯುವವರನ್ನು ಗುರುತಿ ಸುವ ಕೆಲಸ ಆಗಬೇಕು ಎಂದರು.
ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಮಹಾಸಭಾದ ಸದಸ್ಯತ್ವ ಹೆಚ್ಚಿಸುವ ಮೂಲಕ ಎಲ್ಲರೂ ಸೇರಿ ಸಮಾಜಮುಖಿ ಕೆಲಸ ಮಾಡಬೇಕೆಂದರು.
ಸಮಾರಂಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸೊಸೈಟಿಗಳಲ್ಲಿ ಆಯ್ಕೆಯಾದ ಸಮಾಜಬಾಂಧವರಿಗೆ ಸನ್ಮಾನಿಸಲಾಯಿತು. ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ವಿಕ್ರಂ ಕಾರ್ಯಕ್ರಮ ನಿರೂಪಿಸಿದರು, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಆರ್. ಸೋಮನಾಥ್ ಸ್ವಾಗತಿಸಿದರೆ ತೇಜು ವಂದಿಸಿದರು.