ಕೋರಮಂಗಲ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಲೋಡ್ ಶೆಡ್ಡಿಂಗ್: ಉದ್ಯಮಿ ಜೈರಾಜ್ ಆಕ್ರೋಶ
ಬೆಂಗಳೂರು : ಇಲ್ಲಿನ ಕೋರಮಂಗಲ ಎಫ್-ಡಿವಿಜನ್ ವ್ಯಾಪ್ತಿಯಲ್ಲಿ ಅಘೋಷಿತ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ಈ ಭಾಗದ ವ್ಯಾಪಾರಸ್ಥರು ಹಾಗೂ ಕೈಗಾರಿಕೋಧ್ಯಮಿಗಳು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನ ಸಭಾ ಅಧಿವೇಶನದಲ್ಲಿ ಇಂಧನ ಸಚಿವರು ಇಲಾಖೆ ಕುರಿತು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದರೆ ಇತ್ತ ಪ್ರತಿದಿನ ಯಾವುದೇ ಮುನ್ಸೂಚನೆ ಇಲ್ಲದೆ ಬೇಕಾಬಿಟ್ಟಿಯಾಗಿ ವಿದ್ಯುತ್ ನಿಲುಗಡೆ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಸಣ್ಣಪುಟ್ಟ ಕೈಗಾರಿಕೆಗಳು, ಅಂಗಡಿಗಳು, ಹೊಟೇಲ್‌ಗಳು ಸೇರಿದಂತೆ ಇನ್ನಿತರ ವ್ಯಾಪಾರ ವ್ಯವಹಾರ ನಡೆಸುವುದು ಕಷ್ಟವಾಗುತ್ತಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಗೃಹಜ್ಯೋತಿ ಮೂಲಕ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುತ್ತಿರುವುದು ಸ್ವಾಗತಾರ್ಹವಾದರೂ ಹಂತ ಹಂತವಾಗಿ ವಿದ್ಯುತ್ ದರ ಏರಿಸುವ ಮೂಲಕ ಉದ್ಯಮಿಗಳಿಗೆ ಸಂಕಷ್ಟಕ್ಕೆ ದೂಡುತ್ತಿದೆ ಎಂದು ವಿಷಾಧಿಸಿದ್ದಾರೆ.
ದರ ಏರಿಕೆ ಹಾಗೂ ಇನ್ನಿತರ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ವ್ಯಪಾರ ವಹಿವಾಟು ನಡೆಸುವುದೇ ಕಷ್ಟವಾಗಿರುವಾಗ ಒಂದೆಡೆ ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಕೆ ಮಾಡಿರುವುದಲ್ಲದೇ, ಮಾರ್ಚ್ ತಿಂಗಳಲ್ಲೇ ಯಾವುದೇ ಮುನ್ಸೂಚನೆ ನೀಡದೇ ಬೇಕಾಬಿಟ್ಟಿಯಾಗಿ ಲೋಡ್‌ಶೆಡ್ಡಿಂಗ್ ಮಾಡುತ್ತಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆಗೆ ಫೊನ್ ಮಾಡಿದರೆ ಯಾರೂ ಸಂರ್ಪಕ್ಕೆ ಸಿಗುತ್ತಿಲ್ಲ ಎಂದು ಉದ್ಯಮಿ ಜೈರಾಜ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಮುಂದಿನ ಎರಡು ತಿಂಗಳು ಬೇಸಿಗೆ ಕಾಲವಾಗಿದ್ದು, ಈ ರೀತಿ ಏಕಾಏಕಿ ಅನಿಯಮಿತ ವಿದ್ಯುತ್ ನಿಲುಗಡೆ ಮಾಡಿದರೆ ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿರುವ ಜೈರಾಜ್ ಅವರು, ಈ ರೀತಿಯ ಅವೈಜ್ಞಾನಿಕ ಮತ್ತು ಅಘೋಷಿತ ಲೋಡ್ ಶೆಡ್ಡಿಂಗ್ ಮಾಡುವುದನ್ನು ಕೈಬಿಡಬೇಕು ಹಾಗೂ ಈ ಕುರಿತು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೈರಾಜ್ ಅವರು ಆಗ್ರಹಿಸಿದ್ದಾರೆ.


