ಶಿವಮೊಗ್ಗ : ಭಾರತೀಯ ಸಂಸ್ಕೃತಿ ಜಗತ್ತಿನ ಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು. ಇಂತಹ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ರವಾನಿಸಬೇಕು. ಸಾಹಿತ್ಯದ ಮೂಲಕ ಸಂಸ್ಕೃತಿಯ ಮಹತ್ವ ಸಾರಬೆಕೆಂದು ಶಾಸಕ ಎಸ್.ಎನ್. ಚನ್ನಬಸಪ್ಪ ಕರೆ ನೀಡಿದರು.
ಸಹಚೇತನ ನಾಟ್ಯಾಲಯ ದಿಂದ ನಡೆದ ಕಾರ್ಯಕ್ರಮದಲ್ಲಿ ಯುಗಾದಿ ನಿಮಿತ್ತ ಪ್ರಕಟಿಸಿರುವ ೧೫ನೇ ವರ್ಷದ ಕವಿ ಕಂಡ ಯುಗಾದಿ-೨೦೨೫ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತೀಯ ಸಮಾಜ ವೈವಿಧ್ಯತೆಯಿಂದ ಸಮದ್ಧವಾಗಿದೆ. ಸಂಪ್ರದಾಯ, ನಂಬಿಕೆ, ಪದ್ಧತಿ ಮತ್ತು ಮಲ್ಯಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ವಿವಿಧ ಧರ್ಮಗಳು, ಉಪಭಾಷೆಗಳು, ಭೌಗೋಳಿಕ ಸ್ಥಳ, ಭೌಗೋಳಿಕ ಗಡಿಗಳು ಮತ್ತು ಸಾಮಾಜಿಕ ಸಾಮರಸ್ಯದ ಏಕತೆಯು ಭಾರತೀಯ ಸಮಾಜದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ ಎಂದರು.
ಭಾರತೀಯ ಸಂಪ್ರದಾಯ ದಲ್ಲಿ ನಂಬಿಕೆಗಳು, ಆಚರಣೆಗಳು ಮತ್ತು ಪಾಕಪದ್ಧತಿ ಎಂಬ ಅಂಸ ಗಳಿವೆ. ಅದರ ಇತಿಹಾಸದೊಂದಿಗೆ ಭಾರತೀಯ ಸಂಸ್ಕೃತಿಯ ಸಾರವನ್ನು ರೂಪಿಸಲು ಸಹಾಯ ಮಾಡಿದೆ. ಭಾರತೀಯ ಸಂಪ್ರದಾಯಗಳ ನಡುವೆ ಹೆಚ್ಚಿನ ಪ್ರಮಾಣದ ವೈವಿಧ್ಯತೆ ಮತ್ತು ಸಾಮ್ಯತೆ ಗಳಿರುವುದು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಸಹಚೇತನ ನಾಟ್ಯಾಲಯವು ಕಳೆದ ೧೪ ವರ್ಷಗಳಿಂದ ಹೊರ ತಂದಿರುವ ಕವಿ ಕಂಡ ಯುಗಾದಿ ಕವನ ಸಂಕಲನವು ಸಂಗ್ರಹ ಯೋಗ್ಯವಾಗಿವೆ. ಪುಸ್ತಕ ಓದುವ ಅಭಿರುಚಿ ಕಡಿಮೆಯಾಗುತ್ತಿದೆ ಎಂಬ ವಾತಾವರಣದ ನಡುವೆಯೂ ನಿರಂತರವಾಗಿ ಕವನ ಸಂಕಲನ ಹೊರತರುವ ಮೂಲಕ ಸಹಚೇತನ ನಾಟ್ಯಾಲಯವು ತನ್ನದೇ ಆದಂತಹ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಮುಖರಾದ ಚೇತನ್, ಸಹನಾ ಚೇತನ್, ಡಾ. ನಾಗಮಣಿ, ಆನಂದ ರಾಮ್, ವಿನಯ್, ಉಷಾರಾಣಿ, ಮಾಲತೇಶ್, ದಿನೇಶ್ ಆಚಾರ್ಯ ಉಪಸ್ಥಿತರಿದ್ದರು.
ಸಾಹಿತ್ಯದ ಮೂಲಕ ಸಂಸ್ಕೃತಿಯ ಮಹತ್ವ ಸಾರಬೇಕು:ಚನ್ನಬಸಪ್ಪ
