ಶಿಕಾರಿಪುರ : ಜಗತ್ತಿನ ೧೪೭ ದೇಶಗಳಲ್ಲಿ ಮಹಿಳೆಯರೇ ಆಡಳಿತ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡು ಮುನ್ನಡೆಸುತ್ತಿರುವ ಆಧ್ಯಾತ್ಮಿಕ ಏಕಮೇವ ಸಂಸ್ಥೆಯಾಗಿ ಪ್ರಜಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಪ್ರಸಿದ್ದವಾಗಿದೆ ಎಂದು ಇಲ್ಲಿನ ಪ್ರ.ಬ್ರ. ಈ ವಿವಿ ಸಂಚಾಲಕರಾದ ಸ್ನೇಹಕ್ಕ ತಿಳಿಸಿದರು.
ಪಟ್ಟಣದ ರಥಬೀದಿಯಲ್ಲಿನ ಪ್ರಜಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಭಾರತ ದೇಶ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ ದೇಶವಾಗಿದ್ದು, ಸನಾತನ ಭಾರತೀಯ ಸಂಸ್ಕೃತಿಯಲ್ಲಿ ರಾಧಾಕೃಷ್ಣ, ಲಕ್ಷ್ಮೀನಾರಾಯಣ, ಸೀತಾರಾಮ ರೀತಿ ಸತ್ಯ ಯುಗ ದಿಂದಲೂ ಮಹಿಳೆಯರನ್ನು ಗೌರವಿಸಿದ ದೇಶ ಎಂಬ ಹೆಗ್ಗಳಿಕೆ ಭಾರತ ಹೊಂದಿದೆ ಎಂದರಲ್ಲದೇ, ಅಡುಗೆ ಮನೆಯಿಂದ ಆಕಾಶದ ಎತ್ತರಕ್ಕೆ ಏರಿರುವ ಮಹಿಳೆಯ ಪಾತ್ರ ಎ ಕ್ಷೇತ್ರದಲ್ಲಿ ಉತ್ತುಂಗ ಕ್ಕೇರಿರುವುದು ಕಂಡುಬರುತ್ತದೆ, ಎಂದು ತಿಳಿಸಿದರು.

ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು,ದೇಶಕ್ಕೆ ರಾಜ್ಯಕ್ಕೆ ಭಾರತಮಾತೆ ಕನ್ನಡಾಂಬೆ ಎಂದು ಕರೆಯುತ್ತೇವೆ, ಭಾರತ ದೇಶದಲ್ಲಿ ಮಹಿಳೆಗೆ ಹೆಚ್ಚಿನ ಗೌರವ ನೀಡಲಾಗುತ್ತಿದೆ, ಮಹಿಳೆ ಪ್ರಕೃತಿದತ್ತವಾಗಿ ಅದ್ಭುತವಾದ ಶಕ್ತಿ ಉಳ್ಳವಳು ಸಹನೆ, ಶಾಂತಿ, ಪ್ರೀತಿ, ಕ್ಷಮೆ, ಕರುಣೆ, ಸೌಹಾರ್ದತೆ ಇತ್ಯಾದಿ ಗುಣಗಳ ಸಂಗಮವಾಗಿದ್ದು, ಮಹಿಳೆ ಎಂದರೆ ಶಕ್ತಿ, ಮಹಿಳೆ ಎಂದರೆ ಬೆಳಕು, ಮಹಿಳೆ ಎಂದರೆ ಸ್ವರ್ಗಕ್ಕೆ ದಾರಿ, ಮಹಿಳೆ ಎಂದರೆ ಮಹಾನ್ ವ್ಯಕ್ತಿಗಳಿಗೆ ಅದ್ಭುತ ಕಾರ್ಯ ಮಾಡಲು ಜನ್ಮ ನೀಡಿದ ದಾತೆ ಎಂದರು.
ಜಗತ್ತಿನ ೧೪೭ ದೇಶಗಳಲ್ಲಿ ಮಹಿಳೆಯರೇ ಆಡಳಿತ ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸುತ್ತಿರುವ ಏಕಮೇವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪ್ರ.ಬ್ರ. ಈಶ್ವರಿಯ ವಿಶ್ವ ವಿದ್ಯಾಲಯ ಹೊಂದಿದೆ ಎಂದರು.
ಪುರುಷರು ಉನ್ನತ ಪದವಿ ಹೊಂದಿದರೂ ವಿದ್ಯಾದೇವಿ ಸರಸ್ವತಿಯನ್ನು ಆರಾಧಿಸುತ್ತಾರೆ, ಪುರುಷರು ಎಷ್ಟೇ ಹಣ ಗಳಿಸಿದರು ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ, ಪುರುಷರು ಎಷ್ಟೇ ಶಕ್ತಿ ಉಳ್ಳವರಾಗಿದ್ದರು ದುರ್ಗಾ ಶಕ್ತಿಯನ್ನೇ ಆರಾಧಿಸುತ್ತಾರೆ, ಪ್ರತಿ ಪುರುಷರ ಯಶಸ್ವಿಗೆ ಮಹಿಳೆ ಹಿಂದೆ ಇದ್ದರೆ ಪ್ರತಿ ಯಶಸ್ವಿ ಮಹಿಳೆ ಹಿಂದೆ ಪುರುಷ ಇರುತ್ತಾರೆ, ಪ್ರತಿಯೊಬ್ಬರು ಸಂಸ್ಕಾರ ಪರಿವರ್ತನೆಯಿಂದಲೇ ಸಂಸಾರ ಪರಿವರ್ತನೆ ಆಗುತ್ತದೆ ಎಂದು ತಿಳಿದು ನಡೆದಾಗ ಆ ಮನೆ ಸ್ವರ್ಗವಾಗುತ್ತದೆ ಎಂದರು.
ಇತ್ತೀಚಿನ ವರ್ಷದಲ್ಲಿ ಪ್ರತಿ ಯೊಬ್ಬರ ಜೀವನದಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದ್ದು, ಒತ್ತಡದಿಂದ ಮುಕ್ತ ರಾಗಿ ಮನಶಾಂತಿ,ಮನೆ ಶಾಂತಿ, ದೇಶ ಶಾಂತಿ, ವಿಶ್ವ ಶಾಂತಿಗಾಗಿ ಧ್ಯಾನವನ್ನು ಅವಶ್ಯವಾಗಿ ಅಭ್ಯಾಸ ಮಾಡಬೇಕಾಗುತ್ತದೆ, ಈ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಪ್ರತಿದಿನವೂ ರಾಜಯೋಗ ಅಭ್ಯಾಸ ಧ್ಯಾನ ಕಲಿಸಿಕೊಡಲಾಗುತ್ತದೆ, ಪುರುಷರು ಸ್ತ್ರೀಯರು ಮಕ್ಕಳು ವೃದ್ಧರು ಎಲ್ಲರೂ ಸಂಸ್ಥೆಯಲ್ಲಿ ಕಲಿಸುವ ಬದುಕುವ ಕಲೆ ಜೀವನ ಶಿಕ್ಷಣ ಮತ್ತು ಧ್ಯಾನದ ಬಗ್ಗೆ ಅರಿವು ಹೊಂದಲು ಖುzಗಿ ಆಗಮಿಸುವಂತೆ ಕೋರಿದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭಾ ಅಧ್ಯಕ್ಷೆ ಶೈಲಾ ಯೋಗೀಶ್ ಮಡ್ಡಿ ಮಾತನಾಡಿ, ಮಹಿಳೆ ಮನೆಯಲ್ಲಿ ಸಮಾಜದಲ್ಲಿ ಹೆಚ್ಚು ಕೆಲಸ ಮಾಡಲು ಆತ್ಮವಿಶ್ವಾಸ ಹೊಂದಿರುತ್ತಾಳೆ, ಈ ಸಂಸ್ಥೆಯ ಮಾರ್ಗದರ್ಶನ ನಮ್ಮೆಲ್ಲರಿಗೂ ಸದಾ ಸಿಗುತ್ತಿದೆ ಎಂದು ತಿಳಿಸಿದರು.
ಕದಳಿ ವೇದಿಕೆ ಅಧ್ಯಕ್ಷೆ ಕಾಂಚನ ಕುಮಾರ್ ಮಾತನಾಡಿ, ಮನೆಯನ್ನು ಸಮಾಜವನ್ನು ಉತ್ತಮ ಸ್ಥಿತಿಗೆ ತರಲು ಮಹಿಳೆ ಕಾರಣ ಎಂದು ತಿಳಿಸಿದರು.
ವಿದುಷಿ ಸುಷ್ಮಾ ದೀಕ್ಷಿತ್ ಮಾತನಾಡಿ, ಧ್ಯಾನದಿಂದ ಅನಾರೋಗ್ಯವು ದೂರವಾಗಿ ಸದಾ ಕ್ರಿಯಾಶೀಲರಾಗಿರುತ್ತೇವೆ ಭರತನಾಟ್ಯ,ಧ್ಯಾನದಿಂದ ಜೀವನದ ಮಲ್ಯ ವದ್ದಿಯಾಗಲಿದೆ ಎಂದರು.
ಡ್ರೋನ್ ದೀದಿ ಎಂದೆ ಪ್ರಸಿದ್ಧವಾಗಿರುವ ಪ್ರಗತಿಪರ ಮಹಿಳೆ ಆಶಾ ಉಮೇಶ್ ಮಾತನಾಡಿದರು. ಸಾಧಕರನ್ನು ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ರಾಜೇಶ್ವರಿ,ಡಾ.ವಿಜಯನಾಡಿಗ್, ಸಾವಿತ್ರಿ,ವಿಜಯ ಪ್ರಕಾಶ್,ಲತಾ ಮತ್ತಿತರರು ಉಪಸ್ಥಿತರಿದ್ದರು.