ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಿಂದ ಲಂಕೇಶ್ – ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ ಪ್ರಕಟ…

ಶಿವಮೊಗ್ಗ : ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಿಂದ ಜೀವಮಾನ ಸಾಧನೆಗಾಗಿ ಪಿ. ಲಂಕೇಶ್ ಪ್ರಶಸ್ತಿ ಹೆಸರಿನಲ್ಲಿ ಮೂವರಿಗೆ ಹಾಗೂ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ ಈರ್ವರ ಹೆಸರು ಘೋಷಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಏ. ೧೪ರ ಸಂಜೆ ೫.೩೦ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಎನ್. ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಪ್ರೆಸ್ ಟ್ರಸ್ಟ್ ಪತ್ರಕರ್ತರ ಕಲ್ಯಾಣ ಕ್ಕಾಗಿಯೇ ಶ್ರಮಿಸುತ್ತಿರುವ ಸಂಸ್ಥೆಯಾಗಿದ್ದು, ಪತ್ರಕರ್ತರ ಸೇವೆಗಳನ್ನು ಗುರುತಿಸಿ ಪಿ. ಲಂಕೇಶ್ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಮೂರು ವರ್ಷದ ಪ್ರಶಸ್ತಿಗಳನ್ನು ಒಟ್ಟಿಗೆ ನೀಡಲಾಗುತ್ತಿದೆ. ಕೊರೋನಾ ಸಂಕಷ್ಟ ಕಾಲ ಬಂದಿದ್ದರಿಂದ ಎರಡು ವರ್ಷದ ಪ್ರಶಸ್ತಿಗಳನ್ನ ತಡೆಹಿಡಿಯಲಾಗಿತ್ತು. ಈಗ ಈ ಪ್ರಶಸ್ತಿಗಳ ಜೊತೆಗೆ ಈರ್ವ ಕ್ರಿಯಾಶೀಲ ಪತ್ರಕರ್ತರೂ ಸೇರಿ ಐವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಜೀವಮಾನ ಸಾಧನೆ ಪ್ರಶಸ್ತಿಯನ್ನು ೨೦೨೨ನೇ ಸಾಲಿಗೆ ಕನ್ನಡ ಪ್ರಭ ಪತ್ರಿಕೆಯ ಶಿವಮೊಗ್ಗ ಪ್ರಧಾನ ವರದಿಗಾರ ಗೋಪಾಲ್ ಯಡಗೆರೆ, ೨೦೨೩ನೇ ಸಾಲಿಗೆ ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಪಾಲುದಾರ ಹಾಗೂ ಸಂಪಾದಕ ಎಸ್. ಚಂದ್ರಕಾಂತ್ ಅವರಿಗೆ, ೨೦೨೪ನೇ ಸಾಲಿಗೆ ಸಂಯುಕ್ತ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದ ಕೆ. ತಿಮ್ಮಪ್ಪ ಅವರಿಗೆ ಮತ್ತು ೨೦೨೩ನೇ ಸಾಲಿನ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ ಯನ್ನು ತೀರ್ಥಹಳ್ಳಿಯ ಶಿವಾನಂದ ಕರ್ಕಿ ಹಾಗೂ ೨೦೨೪ರ ಪ್ರಶಸ್ತಿ ಯನ್ನು ಸೊರಬದ ಹೆಚ್.ಕೆ.ಎಸ್. ಸ್ವಾಮಿ ಅವರಿಗೆ ನೀಡಲಾಗಿದೆ ಎಂದ ಅವರು, ಜೀವಮಾನ ಸಾಧನೆಯ ಪ್ರಶಸ್ತಿ ೨೦ ಸಾವಿರ ರೂ. ನಗದು ಹಾಗೂ ಫಲಕ ಮತ್ತು ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿಯು ೧೦ ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡಿದೆ ಎಂದರು.
ಹಿರಿಯ ಸಾಹಿತಿ, ಚಿಂತಕ ನಾಡೋಜ ಕುಂ. ವೀರಭದ್ರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಇದರ ಅಧ್ಯಕ್ಷ ಬಿ.ಎಲ್. ಶಂಕರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮತ್ತು ಟ್ರಸ್ಟ್ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.
ಪ್ರೆಸ್ ಟ್ರಸ್ಟ್ ಪಾಲಿಗೆ ಇದೊಂದು ಸಂತಸದ ಕ್ಷಣವಾಗಿದೆ. ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುವಲ್ಲಿ ಹಲವು ಸಂಘಟನೆಗಳು ವಿಫಲವಾಗಿವೆ. ಈ ಪ್ರಶಸ್ತಿ ನೀಡಲು ನಾವು ಯಾವ ಅರ್ಜಿಯನ್ನು ಕರೆದಿಲ್ಲ. ನಾವೇ ಗುರುತಿಸಿದ್ದೇವೆ. ಇನ್ನು ಮುಂದೆ ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರೆಸ್ ಟ್ರಸ್ಟ್ ಪ್ರಶಸ್ತಿ ನನಗೂ ಸಿಗಬೇಕು ಎಂಬ ಹಂಬಲ ಪತ್ರಕರ್ತರzಗ ಬೇಕು ಎಂದು ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಹೇಳಿದರು.
ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಪ್ರೆಸ್ ಟ್ರಸ್ಟ್ ಎ ಕಾರ್ಯಕ್ರಮಗಳನ್ನು ಪತ್ರಕರ್ತರ ಶ್ರೇಯೋಭಿವದ್ಧಿ ಗಾಗಿಯೇ ಮಾಡುತ್ತಾ ಬಂದಿದೆ. ಪತ್ರಕರ್ತರಿಗಾಗಿಯೇ ದುಡಿಯುವ ಸಂಸ್ಥೆ ಇದು. ಸಂಕಷ್ಟದಲ್ಲಿರುವ, ಅನಾರೋಗ್ಯದಿಂದ ಬಳಲುತ್ತಿದ್ದ ಅನೇಕ ಪತ್ರಕರ್ತರಿಗೆ ನೆರವು ಕೂಡ ನಾವು ನೀಡಿದ್ದೇವೆ. ಇದರ ಮುಂದುವರೆದ ಭಾಗವಾಗಿ ಪತ್ರಕರ್ತರ ಜೀವಮಾನ ಸಾಧನೆ ಗುರುತಿಸಿ, ಕ್ರಿಯಾಶೀಲತೆ ಬೆಂಬಲಿಸುವ ದೃಷ್ಟಿಯಿಂದ ಪ್ರೆಸ್ ಟ್ರಸ್ಟ್ ಈ ಪ್ರಶಸ್ತಿ ನೀಡುವ ಉದ್ದೇಶ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಪಿ. ಜೇಸುದಾಸ್, ಸಂತೋಷ್ ಕಾಚನಕಟ್ಟೆ, ಮೋಹನ್‌ಕೃಷ್ಣ, ಕಿರಣ್ ಕಂಕಾರಿ, ಗಜೇಂದ್ರಸ್ವಾಮಿ, ಗುಣಾರಿ, ಪಿ.ಸಿ. ನಾಗರಾಜ್, ಪ್ರಸನ್ನ, ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *