ಶಿವಮೊಗ್ಗ : ಕಬ್ಬಡಿಯಂತಹ ದೇಶೀಯ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ನೆಹರು ಕ್ರೀಡಾಂಗಣದಲ್ಲಿಂದು ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿ. ಭೀಮಸೇನ ರಾವ್ ಕಾನೂನು ಮಹಾ ವಿದ್ಯಾಲಯ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಅಂತರ ಕಾಲೇಜು ರಾಜ್ಯ ಮಟ್ಟದ ಪುರುಷರ ಕಬ್ಬಡಿ ಕ್ರೀಡಾ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯರ ಹೆಮ್ಮೆಯ ಕ್ರೀಡೆ ಕಬ್ಬಡಿ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಎಲ್ಲವನ್ನೂ ನುಂಗಿ ಹಾಕುತ್ತಿದೆ ಎನ್ನುವಾಗ, ಇತರೆ ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಕಾಲೇಜು ಹಂತದಲ್ಲಿಯೆ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಯುವ ಮನಸ್ಸುಗಳಲ್ಲಿ ದೇಶೀಯ ಕ್ರೀಡೆಗಳ ಕುರಿತಾಗಿ ಪ್ರಜ್ವಲನಗೊಳಿ ಸಬೇಕಿದೆ. ನೈಪುಣ್ಯತೆ ಹೊಂದಿದ ವರಿಗೆ ಕಬ್ಬಡಿ ವರದಾನವಾಗಿದೆ ಎಂದರು.
ರಾಜ್ಯದಲ್ಲಿ ಈ ವರ್ಷ ೨೦ ನೂತನ ಕಾನೂನು ಕಾಲೇಜುಗಳು ಪ್ರಾರಂಭಗೊಂಡಿದೆ. ಭಾರತೀಯ ಸಂವಿಧಾನ ಸಹಬಾಳ್ವೆ ಕಾಪಾಡು ವಲ್ಲಿ ವಕೀಲರ ಪಾತ್ರ ಮಹತ್ವದಾಗಿದೆ. ಬದುಕಿನ ಉನ್ನತಿಗೆ ಅಂತಃ ಶಕ್ತಿ ಮುಖ್ಯ. ಆಟ ಪಾಠದ ಜೊತೆಗೆ ಸ್ನೇಹ ಸಾಮರಸ್ಯ ಸಂಪಾದಿಸಿ ಎಂದು ಹೇಳಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ| ಪಿ. ನಾರಾಯಣ್ ಅವರು ಮಾತನಾಡಿ, ಕ್ರೀಡೆಯಲ್ಲಿ ಗೆಲುವು ಸೋಲಿಗಿಂತ ಭಾಗವಹಿಸುವಿಕೆ ಬಹಳ ಮುಖ್ಯ. ಆತ್ಮಸ್ಥೈರ್ಯಯುತ ಭಾಗವಹಿಸು ವಿಕೆ ಬದುಕಿಗೆ ಹೊಸತನದಲ್ಲಿ ಹೊರಳಲು ಅನುವು ಮಾಡಿ ಕೊಡಲಿದೆ. ವಕೀಲ ವೃತ್ತಿಯು ಕೂಡ ಪ್ರತಿದಿನದ ಕಬ್ಬಡಿ ಆಟದಂತೆಯೆ ಎಂದು ಮಾರ್ಮಿಕವಾಗಿ ನುಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಖಲಿದ್ ಖಾನ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಾಂತರಾಜ್.ಎಸ್, ಹೆಚ್.ಎನ್. ದೇವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬಕುಳ ಪ್ರಾರ್ಥಿಸಿ, ತನುಶ್ರೀ ನಿರೂಪಿಸಿದರು.
ಇದೇ ವೇಳೆ ೨೦೨೩-೨೪ ನೇ ಸಾಲಿನಲ್ಲಿ ಕಾನೂನು ವಿಶ್ವವಿದ್ಯಾಲಯದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ದಾಖಲೆ ನಿರ್ಮಿಸಿದ್ದ ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿ ಮೊಹಮ್ಮದ್ ಮಿಜಮಲ್ ಅವರನ್ನು ಅಭಿನಂದಿಸಲಾಯಿತು. ರಾಜ್ಯದ ವಿವಿಧ ಕಾನೂನು ಕಾಲೇಜುಗಳ ಸುಮಾರು ೪೦ ಕ್ಕು ಹೆಚ್ಚು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದೆ.